ಟ್ಯಾಕೊನೈಟ್ -
ಪೂರ್ವಕೇಂಬ್ರಿಯನ್ ಕಲ್ಪದ (ಸುಮಾರು 600 ದಶಲಕ್ಷ ವರ್ಷಗಳಿಗಿಂತ ಹಿಂದಿನ ಕಾಲ) ಅಮೆರಿಕ ವಲಯದ ಲೇಕ್ ಸುಪೀರಿಯರ್ ಪ್ರದೇಶದ ಮರಳು ಮಿಶ್ರಿತ ಕಬ್ಬಿಣದ ಅದುರು. ಇದರ ಸ್ವರೂಪ ಟ್ಯಾಕೊನಿಕ್ ಪರ್ವತಗಳ ಗ್ರ್ಯಾನೈಟ್ ಶಿಲೆಯನ್ನು ಹೋಲುವುದರಿಂದ ಇದಕ್ಕೆ ಟ್ಯಾಕೊನೈಟ್ ಎಂಬ ಹೆಸರು ಬಂದಿದೆ. ಪ್ರಪಂಚದ ಇತರ ಭಾಗಗಳಲ್ಲಿಯೂ ಈ ಬಗೆಯ ಅದುರು ಸಿಗುವುದಾದರೂ ಬೇರೆ ಬೇರೆ ಕಡೆ ಇದಕ್ಕೆ ಬೇರೆ ಬೇರೆ ಹೆಸರುಗಳಿವೆ. ಭಾರತದಲ್ಲಿ ಇದಕ್ಕೆ ಸಮವಾದ ಶಿಲೆಗೆ ಪಟ್ಟಿಯ ಹಿಮಟೈಟ್ ಬೆಣಚು ಶಿಲೆ ಮತ್ತು ಪಟ್ಟಿಯ ಮ್ಯಾಗ್ನಟೈಟ್ ಬೆಣಚು ಶಿಲೆ ಎಂಬ ಹೆಸರುಗಳಿವೆ.

	ಟ್ಯಾಕೊನೈಟ್ ಶಿಲೆಯು ಕಬ್ಬಿಣದ ಮತ್ತು ಸಿಲಿಕದ ಪರ್ಯಾಯ ಪಟ್ಟಿಗಳಿಂದ ಕೂಡಿದೆ. ಇದೊಂದು ಕೆಳದರ್ಜೆಯ ಅದುರು. ಕಬ್ಬಿಣದ ಕಣಗಳು ಕೆಲಸ್ಥಳಗಳಲ್ಲಿ ಕಾಂತೀಯವಾಗಿದ್ದರೆ ಕೆಲಸ್ಥಳಗಳಲ್ಲಿ ಕಾಂತೀಯವಾಗಿರುವುದಿಲ್ಲ. ಸಿಲಿಕ ಇತ್ಯಾದಿ ಕಲ್ಮಷಗಳನ್ನು ಬೇರ್ಪಡಿಸಲು ಮೊದಲು ಈ ಅದುರನ್ನು ಯಂತ್ರಗಳ ಸಹಾಯದಿಂದ ಕುಟ್ಟಿ ಸಣ್ಣಗೆ ಪುಡಿ ಮಾಡಲಾಗುವುದು. ಕಣಗಳ ವ್ಯಾಸ 0.0012 ಮೀ. ಗಿಂತಲೂ ಚಿಕ್ಕದಾಗಿರುತ್ತದೆ. ಕಾಂತೀಯ ಪ್ರತ್ಯೇಕಕಾರಿಗಳ ಉಪಯುಕ್ತ ಕಬ್ಬಿಣದ ಸೂಕ್ಷ್ಮ ಕಣಗಳನ್ನು ಪುಡಿಯಲ್ಲಿರುವ ಇತರ ಅನುಪಯುಕ್ತ ವಸ್ತುಗಳಿಂದ ಬೇರ್ಪಡಿಸಲಾಗುತ್ತದೆ. ಇಂಥ ಸೂಕ್ಷ್ಮಪುಡಿಯನ್ನು ಹಾಗೆಯೇ ಊದು ಕುಲುಮೆಯಲ್ಲಿ ಹಾಕಲಾಗುವುದಿಲ್ಲ. ಇದನ್ನು ಉಂಡೆಗಳನ್ನಾಗಿ ಪರಿವರ್ತಿಸಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಗೆ ಬಳಸುವರು.

	ಅಮೆರಿಕದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅದುರಿನ ಕೊರತೆ ತಲೆದೋರಿದಂತೆ ಎಡ್ವರ್ಡ್ ಡಬ್ಲ್ಯು. ಡೇವೀಸ್ ಎಂಬ ಗಣಿವಿಜ್ಞಾನಿ ಕೆಳದರ್ಜೆಯ ಅದುರಾದ ಟ್ಯಾಕೊನೈಟಿನತ್ತ ಆ ರಾಷ್ಟ್ರದ ಲಕ್ಷ್ಯವನ್ನು ಸೆಳೆದ. ಎರಡನೆಯ ಮಹಾಯುದ್ಧದ ತರುವಾಯ ಈ ಬಗ್ಗೆ ತೀವ್ರಲಕ್ಷ್ಯವನ್ನು ನೀಡಲಾಗಿ ಕೆಳದರ್ಜೆಯ ಅದುರನ್ನು ಸಂಸ್ಕರಿಸುವ ಸುಲಭೋಪಾಯಗಳನ್ನು ಕಂಡು ಶೋಧಿಸಲಾಯಿತು. 1968ರಲ್ಲಿ ಅಮೆರಿಕದಲ್ಲಿ ಉತ್ಪಾದಿಸಲಾದ ಒಟ್ಟು ಕಬ್ಬಿಣದ ಶೇಕಡ 40 ರಷ್ಟು ಕಬ್ಬಿಣ ಟ್ಯಾಕೊನೈಟ್ ಅದುರಿಗೆ ಸೇರಿದ್ದು: ಲೇಕ್ ಸುಪೀರಿಯರ್ ಪ್ರದೇಶದ ಟ್ಯಾಕೊನೈಟ್ ಸಂಗ್ರಹವು 254 ಮಿ.ಮೀ. ಟನ್ ಕಬ್ಬಿಣಕ್ಕೆ ಸಮವಾಗಿದೆ ಎಂದು ಪರಿಶೋಧನೆಗಳಿಂದ ತಿಳಿದಿದೆ.	
(ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ